ನಂದಿನಾಥ
ಸು. 1745. ವೀರಶೈವ ಕವಿ. ವಲ್ಲೀಕಂಠಾಭರಣ ಎಂಬ ಕೃತಿಯ ಕರ್ತೃ. ಕಾವ್ಯದಲ್ಲಿ ತನ್ನ ಪರಂಪರೆಯ ಪಟ್ಟಿಯನ್ನು ಕೊಟ್ಟಿರುವುದರಿಂದ ಈತನ ತಂದೆ ವೀರಭದ್ರೇಶನೆಂದೂ ತಾಯಿ ಕಾಳಿಕಾಂಬೆ ಎಂದೂ ತಿಳಿಯುತ್ತದೆ. ಈತನ ವಿದ್ಯಾಗುರು ಪುಟ್ಟವರ್ಯ. ವಲ್ಲೀಕಂಠಾಭರಣ ಯಕ್ಷಗಾನ ಕೃತಿಯಂತಿದ್ದು 9 ಸ್ಥಲಗಳನ್ನೂ 1,610 ಕಂದವೃತ್ತಪದ್ಯಗಳನ್ನೂ ಒಳಗೊಂಡಿದೆ. ಇದನ್ನು ಕ್ರೋಧನ ಸಂವತ್ಸರದಲ್ಲಿ ಬರೆದು ಮುಗಿಸಿದಂತೆ ತಿಳಿಯುತ್ತದೆ. ಈ ಕಾವ್ಯದಲ್ಲಿ ಮುಖ್ಯವಾಗಿ ಷಣ್ಮುಖನ ದಿಗ್ವಿಜಯ, ವಲ್ಲೀಪರಿಣಯ ವರ್ಣಿತವಾಗಿದೆ. ಕಥೆ ಸೂತಮಹಾಪುರಾಣಿಕ ಶೌನಕಾದಿಗಳಿಗೆ ಹೇಳಿದಂತಿದೆ. ಪೂರ್ವಕವಿಗಳಲ್ಲಿ ಸೋಮಾರಾಧ್ಯ, ನಿಜಗುಣ, ಷದಕ್ಷರದೇವ- ಇವರನ್ನು ಕವಿ ಸ್ಮರಿಸಿದ್ದಾನೆ.	
	(ಎಸ್.ಎನ್.ಜಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ